Friday, February 19, 2010

ದಸ್ಕತ್ತು

ದಸ್ಕತ್ತು ಅಂದರೇನು?
ರುಜು ಅಥವಾ ಸೈನು.
ಇದು ನಿಘಂಟಿನ ಅರ್ಥ
ಇರಲಿ ಅದರ ಪಾಡಿಗೆ
ದಸ್ ಅಂದರೆ ಹತ್ತು
ಕತ್ತು ಅಂದರೆ ಕುತ್ತಿಗೆ
ಆದ್ದರಿಂದ ಓ ಜಾಣ
ದಸ್ಕತ್ತು ಅಂದ್ರೆ ರಾವಣ!

Thursday, February 18, 2010

ಕೇಸರಿ ಬಾತ್

ರಂಗ ಸರ್ಕಾರ
ಕೇಳಲೇ ಬೇಕು
ಕಾಂಗ್ರೆಸ್ಸಿನ ಮಾತು
ಕಹಿಯಾಗಿದ್ದರೂ
ಹೇಳಲೇ ಬೇಕು
ಆಹಾ!
'ಕೇಸರಿ' ಬಾತು!

Wednesday, February 17, 2010

ಹೋಲಿಕೆ

ಇಡಿಗವನ
ಲಾನ್ ಟೆನ್ನಿಸ್
ಹನಿಗವನ
ಟೇಬಲ್ ಟೆನ್ನಿಸ್.

Tuesday, February 16, 2010

ದೌರ್ಬಲ್ಯ

ನನ್ನ ದೌರ್ಬಲ್ಯವು
ಅವೇ ಎರಡು
ಮಹಿಳೆ
ಮತ್ತು ಮದ್ಯ.
ಮಹಿಳೆ
ನನ್ನವಳೇ,
ಮದ್ಯ
ತುಂಟ ಪದ್ಯ!

Monday, February 15, 2010

ಪ್ರತಿಮೆ

ಹೆದ್ದಾರಿಯ ಗದ್ದಲ 
ಟ್ರಾಫ್ಫಿಕ್ಕಿಗೆ ಬೆದರಿ 
ನಿಂತಲ್ಲೇ ನಿಂತು 
ಕಲ್ಲಾಯಿತು 
ಚೆನ್ನಮ್ಮನ ಕುದುರಿ.

Sunday, February 14, 2010

ಕಾರಣ

ಮೊದಲು
ಬೋರಾದರೂ
ಕವಿಗೋಷ್ಠಿ
ಕೊನೆಯಲ್ಲಿ ಭಾಳ
ಛಲೋ ಇತ್ರಿ
ಕೊನೆಯಲ್ಲಿ
ಓದಿದ್ದು ಯುವ
ಕವಿಯತ್ರಿ

Saturday, February 13, 2010

ಉತ್ತರ

ವಿಮರ್ಶಕರು 
ದುಡುಕುತ್ತಾರೆ
ಕಾವ್ಯದಲ್ಲಿ
ಹೊಸತೇನು?
ಕವಿ ಹೇಳುತ್ತಾನೆ
ನಿರಾಶರಾಗದಿರಿ
ಏನು ಬೇಕಾದರೂ
ಹೊಸದೇನು

Friday, February 12, 2010

ಮರ

ಹೂವಿಲ್ಲದ ಮರ
ಹಣ್ಣಿಲ್ಲದ ಮರ
ಕ್ಯಾಮರ

ರಸ್ತೆಯುದ್ದಕ್ಕೂ
ಬಿದ್ದುಕೊಂಡ ಮರ
ಡಾಮರ

ಅದೃಷ್ಟದ ಮರ
ದುಡ್ಡಿನ ಮರ
ಯಾವುದು ಹೇಳ್ರಿ?
ಗೊತ್ತಾಗದಿದ್ರೆ
ನಾ ಹೇಳ್ತೀನ್ರಿ
ಲಾ-TREE!

Thursday, February 11, 2010

ಬ್ಯಾಂಕಿನಲ್ಲಿ

ಕ್ಯಾಶ್ ಕೌಂಟರಿನ
ಚೆಲುವೆಯ
ಸೌಂದರ್ಯದತ್ತ
ಹರಿದು ನೋಟ,
ಗಮನಿಸಲಿಲ್ಲ
ಅವಳು ಕೊಟ್ಟ
ಹರಿದ ನೋಟ!

Wednesday, February 10, 2010

ವ್ಯತ್ಯಾಸ

ಸಂಪ್ರದಾಯಕ್ಕೂ
ಬಂಡಾಯಕ್ಕೂ
ವ್ಯತ್ಯಾಸ
ಇಸ್ಟೇ ಕಣಯ್ಯಾ.
ಪತಿಯೇ ದೇವರೆಂದು
ಅಜ್ಜಿ ಹೇಳಿದ್ದು
ಸಂಪ್ರದಾಯ
ದೇವರೇ ಪತಿಯೆಂದು
ಅಕ್ಕ ಹೇಳಿದ್ದು
ಬಂಡಾಯ.

Tuesday, February 9, 2010

ದೃಶ್ಯ

ನಾಚಿಕೆಯಿಂದ
ಮುಖ ತಿರುವಿ ನಿಂತ
ಉವತಿ
ಸೂರ್ಯಕಾಂತಿ
ಇಣುಕಿ ಬಗ್ಗಿ
ಮುಸಿ ಮುಸಿ ನಗುವ
ಉಡಾಳ
ಮುಸಿಕುನ ಜೋಳ
ಎಲ್ಲಕ್ಕಿಂತ ಎತ್ತರ
ಬಿಳಿಟೋಪಿಯ
ನಾಯಕರ ಥರ
ಹೂ ಬಿಟ್ಟ
ಕಬ್ಬಿನ ತೋಟ

Monday, February 8, 2010

ಸರಿ

ಅಂದು ಅ ಸಭೆಯಲ್ಲಿ
ಹಾಗೆ ಹೇಳಿದ್ದು ಸರಿ
ಇಂದು ಈ ಸಭೆಯಲ್ಲಿ
ಹೀಗೆ ಹೇಳಿದ್ದೂ ಸರಿ
ನಾಳೆ ಎರಡನ್ನು
ನಿರಾಕರಿಸಿದರೆ
ಅದೂ ಸರಿ
ರಾಜಕಾರಣದಲ್ಲಿ ಸುಳ್ಳು
ಕಂಪಾಲ್-ಸರಿ!

Sunday, February 7, 2010

ಬೇಕು

ಮಗಳಿದ್ದಾಳೆ ಆರತಿಗೆ
ಮಗ ಇದ್ದಾನೆ ಕೀರ್ತಿಗೆ
ಇನ್ನು ನಾನೇಕೆ?
ಅಣ್ಣ ಬೇಡ ಪ್ರಿಯೆ
ನೀನೇ ಬೇಕು ಸ್ಪೂರ್ತಿಗೆ.

Saturday, February 6, 2010

ಸ್ವಯಂ

ಹೆಣ್ಣು
ತನ್ನ ಗಂಡನನ್ನು
ತಾನೇ ಆರಿಸುವುದು
ಸ್ವಯಂ ವರ
ಗಂಡು ಹಾಗೆ
ಮಾಡಿದರೆ ಅದು
ಸ್ವಯಂ WORRY!

Friday, February 5, 2010

ಈ ಸಲ

ಇಂದ್ರ ಪುನಃ ಬಂದ
ಕ್ಕೊಕ್ಕೊಕ್ಕೋ ಅಂದ
ಈ ಸಲ ಜಾಣೆ ಅಹಲ್ಯ
ಮಾಡಿದಳು ಕೋಳಿ ಪಲ್ಯ!

Thursday, February 4, 2010

ಅಂಜಿಕೆ

ಜಿಂಕೆ ಹೆದರುತ್ತದೆ ಹುಲಿಗೆ
ಬೆಂಕಿ ಬೆದರುತ್ತದೆ ಮಳೆಗೆ
ಪತಿ ಅಂಜುವನು
ಸತಿಯ ಮಾತಿಗೆ
ಕಿವುಡರೂ ಅಂಜುವರು
ಇಂದಿನ ಚಿತ್ರಗೀತೆಗೆ!

Wednesday, February 3, 2010

ಸಚಿವರ ರೀತಿ

ಹಾಕಿದ ಕೂಡಲೇ
ಕಳಚಿ ಕೆಳಗೆ
ಇಡುತ್ತಾರೆ ಮಾಲೆ
ಮನವಿ ಪತ್ರಕ್ಕೂ
ಇದೇ ಗತಿ
ಸಭೆ ಮುಗಿದ ಮೇಲೆ.

Tuesday, February 2, 2010

ವಿಧಾನ

ನಿಧನ ಎಸೆದರೂ
ಎಚ್ಹೆರ ತಪ್ಪಿದರೆ
ವಿಕೆಟ್ ಉರುಳಿಸುವರು
ಸ್ಪಿನ್ನರು.
ರಾಜಕೀಯದಲ್ಲೂ
ಇದೆ ವಿಧಾನ
ಅನುಸರಿಸುವವರು
ಭಿನ್ನರು!

Monday, February 1, 2010

ಪತ್ನಿಯ ಸ್ವಗತ

ಇವರಿಗೆ ನನಗಿಂತ
ಕವಿತೆಯೇ ಹಿತ.
ಮದುವೆಯಾದರೂ
ಇವರು
ಕವಿವಾಹಿತ!

Saturday, January 30, 2010

ಮುನ್ನುಡಿ

ಉದಯೋನ್ಮುಖರ
ಕವನ ಸಂಗ್ರಹಕ್ಕೆ
ಹಿರಿಯರ
ಮುನ್ನುಡಿ, ಹರಕೆ.
ಯುವತಿ ಧರಿಸುವಂತೆ
ರವಿಕೆ!